ಇಗ್ವಾನ (ಕಡಲಗೌಳಿ)-
ಇದೇ ಹೆಸರಿನ ಕುಟುಂಬಕ್ಕೆ ಸೇರಿದ ದೊಡ್ಡ ಜಾತಿಯ ಹಲ್ಲಿ. ಗಾಲಪೋಗಾಸ್ ದ್ವೀಪಗಳ ಕಡಲ ತೀರದಲ್ಲಿ ಬಂಡೆಗಳ ಮೇಲೆ ವಾಸಿಸುತ್ತವೆ. ಹಲ್ಲಿಗಳಲ್ಲಿ ಇದೊಂದೇ ಪ್ರಬೇಧ ಕಡಲವಾಸಿ. ಅಪಾಯ ಎದುರಾದಾಗ ಕಡಲಿಗೆ ನೆಗೆದು ರಕ್ಷಿಸಿಕೊಳ್ಳುವುವು. ನೀರಿನಲ್ಲಿ ಮುಳುಗಬಲ್ಲವು ಹಾಗೂ ಈಜಬಲ್ಲವು. ಹಲ್ಲುಗಳು ಹರಿತವಾದ ಅಲಗುಗಳಂತೆಯೂ ಮೇಲುತುದಿ ಗರಗಸದಂತೆಯೂ ಇವೆ. ದೇಹದ ಮೇಲೆ ಸಣ್ಣ ಸಣ್ಣ ಹುರುಪೆಗಳು, ಬೆನ್ನಿನ ಮೇಲೆ ಏಣು, ಹ್ರಸ್ವ ನಾಲಗೆ, ಕತ್ತಿನ ತಳಭಾಗದಲ್ಲಿ ನೆರಿಗೆಯಾಗಿರುವ ಚರ್ಮದ ಚೀಲವಿದೆ. ಇದನ್ನು ರತಿಕ್ರೀಡೆ ಹಾಗೂ ಶತ್ರುಗಳನ್ನು ಬೆದರಿಸಲು ಬಳಸುತ್ತದೆ. ಇವು ಈ ಪ್ರಾಣಿಯ ಲಕ್ಷಣಗಳು. ಈ ಹಲ್ಲಿ ಸುಮಾರು 6 ಉದ್ದ ಬೆಳೆಯಬಲ್ಲದು. ಬಣ್ಣ ಹಸಿರು. ಮೈಮೇಲೆ ಕಂದುಬಣ್ಣದ ಅಡ್ಡಪಟ್ಟಿಗಳಿವೆ. ಸಸ್ಯಾಹಾರಿ ಅಂಡಜ. ಆದರೆ ಕೆಲವು ಅಂಡಜರಾಯುಗಳು. ಈ ಹಲ್ಲಿಗೂ ಗತಕಾಲದ ಇಗ್ವಾನೊಡಾನ್ (ನೋಡಿ- ಇಗ್ವಾನೊಡಾನ್) ಹಲ್ಲಿಗೂ ಬಲುಮಟ್ಟಿನ ಹೋಲಿಕೆ ಇರುವುದನ್ನು ಗುರುತಿಸಲಾಗಿದೆ.										
	(ಎಂ.ಡಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ